ಇರಂಗೋಳದೇವ

ಚಾಲುಕ್ಯವಂಶದ ಇಮ್ಮಡಿ ಜಗದೇಕಮಲ್ಲ 12ನೆಯ ಶತಮಾನದಲ್ಲಿ ಕಲ್ಯಾಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಕರ್ಣಾಟಕ ಸಾಮ್ಯಾಜ್ಯವನ್ನು ಆಳುತ್ತಿದ್ದಾಗ ಮಂಡಲೇಶ್ವರನಾದ ಈತ ಅನಂತಪುರ ಜಿಲ್ಲೆಯ ರಾಜ್ಯಭಾಗದಲ್ಲಿ ಗುಯ್ಯಲೂರು ಅಥವಾ ಗೊಯ್ಯದವಾಡಿ ಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದ. ಇವನಿಗೆ ಹೈಹಯರಾಜೇಂದ್ರಚೋಳನೆಂಬ ಹೆಸರೂ ಇದೆ. ಇರಂಗೋಳದೇವನ ಅನೇಕ ಶಾಸನಗಳು ಈ ಪ್ರಾಂತ್ಯದಲ್ಲಿ ದೊರಕಿವೆ. ಇರಂಗೋಳನ ಮಗನ ಶಾಸನಗಳು ಕ್ರಿ.ಶ. 1173, 1181ರಲ್ಲಿ ಲಿಖಿತವಾಗಿವೆ. ಈ ಶಾಸನಗಳಲ್ಲಿ ಇವನನ್ನು ಮಹಾಮಂಡಲೇಶ್ವರ ಇರಂಗೋಳ ಚೋಳ ಮಹಾರಾಜನೆಂದು ಕರೆಯಲಾಗಿದೆ. ಇದು ಕ್ರಿ. ಶ. 1139ರ ಕಾಲದ್ದು. ಹೈಹಯ ಕಾರ್ತವೀರ್ಯನ ವಂಶಜರೆಂದು ಹೇಳಿಕೊಳ್ಳುವ ಚೋಳರ ಇತಿಹಾಸ 1128-1206ರ ಸುಮಾರಿನ ಶಾಸನಗಳಲ್ಲಿ ಲಿಖಿಸಲಾಗಿದೆ ಮಾಹಿಷ್ಮತೀಪುರಕ್ಕೆ ಅಲಂಕಾರಭೂತನೂ ಕೋನಮಂಡಲಾಧಿಪತಿಯೂ ಹೈಹಯವಂಶಜ ರಾಜ ಪೆರೇಡುಕುಮಾರನೂ ವಿಕ್ರಮರುದ್ರ ಬಿರುದಾಂಕಿತನೂ ಆದ ರಾಜೇಂದ್ರ ಚೋಳನ ಶಾಸನ ಇವುಗಳಲ್ಲಿ ಪುರಾತನವಾದುದು. ಮಾಹಿಷ್ಮತಿ ಕಾರ್ತವೀರ್ಯನ ವಂಶಜರಲ್ಲಿ ಒಬ್ಬನಾದ ಪ್ರತೀಪನಿಗೆ ರಾಜಧಾನಿಯಾಗಿದ್ದು ರೇವಾನದೀತೀರದಲ್ಲಿದ್ದಂತೆ ರಘವಂಶದಲ್ಲಿ ಹೇಳಿದೆ. ಚಾಲುಕ್ಯ ಚೋಳ ಮತ್ತು ವೆಲನಾಟಚೋಳರಿಗೆ ಸೇರಿದ ಕೋನಮಂಡಲವನ್ನು ಆಳಿದ ರಾಜವಂಶಕ್ಕೆ ಹೈಹಯವಂಶವೆಂದು ಹೆಸರು.						
	(ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ